
ಮಧ್ಯ ರಾತ್ರಿ 1 ಗಂಟೆಗೆ , ಚಲಿಸುವ ಜಂತುಗಳಲ್ಲಿ , ಎರಡನೇ ಸ್ಥಾನ ಡಾಕ್ಟರ್ಗಳಿಗೆ ಸಲ್ಲಬೇಕು , ಮೊದಲನೆಯವರು ಯಾರು ಅಂದ್ರಾ ?
ದೆವ್ವ ಅಂತೂ ಅಲ್ಲ! ಅದೂ ಡಾಕ್ಟರ್ರೇ! ಇನ್ನೊಬ್ಬ ಡಾಕ್ಟರ್ ಅಷ್ಟೇ! ಎದ್ದು ಬಿದ್ದು ರಾತ್ರಿ ಹಗಲೆಲ್ಲಾ ಓದಿ, ಮತ್ತದೇ ರಾತ್ರಿ ಹಗಲು ಕೆಲಸವಿರೋ, ಒಂದೇ ವೃತ್ತಿ ಅದು ವೈದ್ಯವೃತ್ತಿ. ನೀವೇನು ಪ್ರತಿಫಲವಿಲ್ಲದೇ ಕೆಲಸ ಮಾಡ್ತೀರಾ? ಎಂಬುದು ಸಾಮಾನ್ಯ ಜನರ ಪ್ರಶ್ನೆ? ನಿಜ. ನಾವು ಪ್ರತಿಫಲಾಪೇಕ್ಷಿಗಳೇ ನಾವು ಮನುಷ್ಯರೇ. ಈಗ ಆ ಪ್ರತಿಫಲದ ಛಾಯೆಯನ್ನೊಮ್ಮೆ ಗಮನಿಸೋಣ. ಕಲ್ಪನೆಯ ಕುದುರೆಯನ್ನೇರಿ ಬರೆಯೋ ಬದಲು ಒಂದು ನಿದರ್ಶನದ ಸಹಾಯದಿಂದ ನಾನಿದನ್ನು ವಿಮರ್ಶಿಸಲಿಚ್ಚಿಸುತ್ತೇನೆ. ಅಂದು ಮಧ್ಯ ರಾತ್ರಿ ಎರಡು ಗಂಟೆಯ ಸಮಯ, ತುರ್ತು ಚಿಕಿತ್ಸಾ ಘಟಕದಿಂದ ಕರೆ ಬಂತು. ಈ ಕರೆಯ ಬಲ ಹೇಗಿರುತ್ತೆ ಎಂದರೆ ನಾವು ಎಲ್ಲೇ ಇರಲಿ ಏನೇ ಮಾಡುತಿರಲಿ ತಕ್ಷಣ ಬರಲೇಬೇಕು. ನಾನು ಆತುರಾತುರವಾಗಿ ಬಂದೆ ಬಂದು ನೋಡಿದರೆ ಸುಮಾರು ಮೂವತ್ತು ವರ್ಷದ ಯುವಕನ ಹೊಟ್ಟೆಯಲ್ಲಿ ಚಾಕುವೊಂದು ಚುಚ್ಚಿತ್ತು. ಆತನ ಬಿ.ಪಿ ಆಗಲೇ ಕಡಿಮೆಯಾಗಿತ್ತು. ತಕ್ಷಣವೇ ರಕ್ತಸ್ರಾವವನ್ನು ನಿಲ್ಲಿಸುವ ಜವಾಬ್ದಾರಿ ನನ್ನ ಮೇಲಿತ್ತು. ಕೆಲವು ರಕ್ತ ಪರೀಕ್ಷೆಗಳನ್ನು ಮಾಡಿದ ನಂತರ ಶೀಘ್ರವಾಗಿ ಸರ್ಜರಿಗೆ ಕರೆದೊಯ್ಯಲಾಯಿತು. ಜಠರ ಮೇದೋಜೀರಕಾಂಗ ದೊಡ್ಡ ಕರುಳಿನ ಸ್ವಲ್ಪ ಭಾಗವು ಹರಿದಿದ್ದವು. ಕೆಲವು ಗಂಟೆಗಳ ಸರ್ಜರಿಯ ನಂತರ ಎಲ್ಲಾ ರಕ್ತಸ್ರಾವವು ನಿಂತಿತು. ಸರ್ಜರಿಯು ಯಶಸ್ವಿಯಾಯಿತು. ಒಂದು ವಾರದ ನಂತರ ಆತನ ಡಿಶ್ಚಾರ್ಜ್ ಸಹ ಆಯಿತು. ಸುಖಾಂತ್ಯವಲ್ಲವೇ? ಸರಿ ನನಗೆ ಬಹಳ ಖುಷಿಯಾಯಿತು. ಸರ್ಜರಿಗೆ ಬಂದ ರೋಗಿಯು ಸರ್ಜರಿಯಾದ ಮೇಲೆ ಸರ್ಜನ್ಗೆ ಮಗುವಿನಂತೆ ಅವರು ಆರಾಮವಾಗಿಲ್ಲವೆಂದಾಗ ಮನಸ್ಸು ಚಡಪಡಿಸಿ ನೆಮ್ಮದಿ ಹಾಳಾಗುವುದು ಸಾಮಾನ್ಯ ವಿಷಯ. ಸರಿ ಹೇಗೋ ಒಳ್ಳೆಯದಾಯ್ತು ಎಂದು ನಿಟ್ಟುಸಿರು ಬಿಟ್ಟೆ. ಕರೆ ಬಂದ ತರಾತುರಿಯಲ್ಲಿ, ನಾನು ಆ ಚಾಕು ಅಲ್ಲಿಗೇಕೆ ಬಂತು ಅದನ್ನು ಈತನಿಗೆ ಚುಚ್ಚಿದವರು ಯಾರು? ಏಕಾಗಿ ಇಷ್ಟು ತಡವಾಗಿ ಇಲ್ಲಿಗೆ ಈತ ಬಂದಿದ್ದಾನೆ ಎಂಬ ವಿಷಯಗಳ ಬಗ್ಗೆ ಗಮನವಹಿಸಿರಲಿಲ್ಲ. ಏಕೆಂದರೆ ಆ ಕ್ಷಣಕ್ಕೆ ಆ ವಿಷಯಗಳು ನನಗೆ ಬೇಡದಾಗಿತ್ತು. ಆತ ಮತ್ತೆ ಬರಲೂ ಇಲ್ಲ. ಸುಮಾರು ೬ ತಿಂಗಳ ನಂತರ ನನಗೆ ಸಿರಸಿ ಕೋರ್ಟಿನಿಂದ ಸಮನ್ಸ್ ಬಂತು. ಅವಾಕ್ಕಾದೆ. ಆತ ಒಬ್ಬ ರೌಡಿಶೀಟರ್ ಅಂತೆ ಆತನಿಗೆ ಆತನ ವೈರಿಗಳು ಕಳೆದ ಬಾರಿ ಚುಚ್ಚಿದ್ದರಿಂದ ಆತನಿಗೆ ಸರ್ಜರಿಯ ಅವಶ್ಯಕತೆ ಬಂದಿತ್ತAತೆ. ಆ ಸರ್ಜನ್ ನಾನೇ!! ಈಗ ಆತ ಒಂದು ಕೊಲೆಯ ವಿಫಲ ಯತ್ನ ಮಾಡಿ ಸಿಕ್ಕಿ ಬಿದ್ದಿದ್ದ. ಹಳೆಯ ಕೇಸ್ ಓಪನ್ ಆಗಿತ್ತು. ನಾನೂ ಸಿಕ್ಕಿಬಿದ್ದೆ! ನನ್ನ ಊರಿಗೂ ಸಿರಸಿಗೂ ಸುಮಾರು ಇನ್ನೂರಕ್ಕೂ ಹೆಚ್ಚು ಕಿ.ಮಿ ದೂರ. ಈಗಿನ ಆನ್ಲೈನ್ ಯುಗದಲ್ಲಿ ಸಮನ್ಸ್ ವಾಟ್ಸ್ಯಾಪ್ನಲ್ಲೇ ಬರೋದರಿಂದ ಅದು ಬಂದಿದ್ದು ಹಿಂದಿನ ದಿನ ಸಾಯಂಕಾಲ ಬಂದಿಲ್ಲವೆAದು ಹೇಳಲಾಗುವುದಿಲ್ಲ ಹೋಗದೇ ಬೇರೆ ವಿಧಿಯಿಲ್ಲ. ಮೊದಲ ಬಾರಿ ಕೋರ್ಟಿನ ಮೆಟ್ಟಿಲು ಹತ್ತಿದೆ. ನನ್ನ ಸಾಕ್ಷಿಯನ್ನು ನೀಡಿದೆ ಮತ್ತೆ ಬರಬೇಕಾಗತ್ತೆ ಎಂಬ ಸೂಚನೆ ನೀಡಿ ಕೋರ್ಟಿನಿಂದ ನಿರ್ಗಮಿಸಿದೆ. ಇದರಲ್ಲಿ ಅಂತಹ ಮುಖ್ಯವಾದದ್ದು ಏನಿದೆ ಎಂದಿನಿಸ ಬಹುದು. ಆ ದಿನ ನಮ್ಮ ಮನೆಯಲ್ಲಿ ವಿಶೇಷವಾದ ದಿನ ನಾನೆಲ್ಲೂ ಹೋಗಬಾರದು ಎಂದಿದ್ದರು! ಆದರೆ ಸಮನ್ಸ್ಗೆ ನಿರಾಕರಿಸಬಾರದ್ದರಿಂದ ಹೊರಟಿದ್ದೆ. ರೋಗಿಗೆ ಸರ್ಜರಿಯಾಗಿದ್ದು ತಡರಾತ್ರಿ. ಆತ ಸರ್ಜರಿಯ ನಂತರ ಚೇತರಿಸಿಕೊಂಡಿದ್ದ. ತಡರಾತ್ರಿ ಸರ್ಜರಿ ಮಾಡಿದ ಒತ್ತಡ ಒಂದೆಡೆಯಾದರೆ. ಆತ ಮಾಡಿದ್ದ ಇನ್ನೊಂದು ತಪ್ಪಿಗೆ ನಾ ಕೋರ್ಟಿಗೆ ನನ್ನ ಕೆಲಸ ಬಿಟ್ಟು ಅಲೆಯ ಬೇಕಾದದ್ದು ಎಷ್ಟು ಸರಿ? ಪ್ರತಿಫಲ ಎಂದರೇನು? ರಾತ್ರಿ ಹಗಲು ದೇಹವ ದಂಡಸಿ ಮನದ ಮೇಲಿನ ಒತ್ತಡವ ಹೆಚ್ಚಿಸಿಕೊಂಡು ಕೆಲಸಮಾಡುವುದು ಏತಕ್ಕೆ? ಹಣದಿಂದ ನೆಮ್ಮದಿ ಸಿಗಲಾರದು ಆದರೆ ವೈದ್ಯರಿಗೆ ಸಮಾಧಾನಪಡಿಸಲು ಹಣವೆಂಬ ಅಗ್ಗದ ಪದಾರ್ಥ ನೀಡಿ ತೃಪ್ತಿಗೊಳಿಸಲಾಗುತ್ತಿದೆ. ಅವರೆಕಾಯಿಯಲ್ಲಿನ ಹುಳದಂತೆ ಅಲ್ಲೊಂದು ಇಲ್ಲೊಂದು ಧನದಾಹಿ ವೈದ್ಯರಿರಬಹುದು. ಹಾಗೆಂದು ಇಡಿಯ ಸಮುದಾಯವೇ ಹುಳುಗಳಿಂದ ತುಂಬಿದೆ ಎನ್ನಲಾಗುವುದೇ?
ಕೇವಲ ಹಣ ಎಲ್ಲಕೂ ಉತ್ತರವೇ?